ಚಾಸರ್, ಜೆಫ್ರಿ -
1340-1400. ಇಂಗ್ಲಿಷ್ ಕಾವ್ಯದ ಜನಕನೆಂದೂ ಕಥನಕವನ ರಚನೆಯಲ್ಲಿ ಅದ್ವಿತೀಯನೆಂದೂ ಹೆಸರು ಪಡೆದ ಕವಿ. ಜನನ ಲಂಡನ್ನಿನಲ್ಲಿ. ತಂದೆ ಮದ್ಯ ವ್ಯಾಪಾರದಲ್ಲಿ ಏಳಿಗೆ ಹೊಂದಿ ಧನಿಕನಾಗಿದ್ದ. ಚಾಸರನ ವಿದ್ಯಾಭ್ಯಾಸದ ಬಗ್ಗೆ ಖಚಿತವಾದ ಮಾಹಿತಿ ದೊರೆತಿಲ್ಲದಿದ್ದರೂ ಇವನಿಗೆ ಫ್ರೆಂಚ್, ಇಟಾಲಿಯನ್, ಲ್ಯಾಟಿನ್ ಭಾಷೆಗಳಲ್ಲಿ ಓದಿ ಬರೆಯುವಷ್ಟು ಪರಿಶ್ರಮವಿತ್ತೆಂದೂ ಸಾಹಿತ್ಯ, ತತ್ತ್ವಶಾಸ್ತ್ರ, ನ್ಯಾಯಶಾಸ್ತ್ರ, ಖಗೋಳಶಾಸ್ತ್ರ, ಕ್ರೈಸ್ತಧರ್ಮ ಶಾಸ್ತ್ರಗಳಲ್ಲಿ ಸಾಕಷ್ಟು ಶಿಕ್ಷಣವಿತ್ತೆಂದೂ ಇವನ ಕೃತಿಗಳಿಂದ ತಿಳಿಯಬರುತ್ತದೆ. ಯುವಕನಾಗಿದ್ದಾಗಲೇ ಅಲ್‍ಸ್ಟರ್ ಕೌಂಟೆಸ್ ಆಗಿದ್ದ ಎಲಿಜûಬೆತ್‍ಳ ಪರಿಚರನಾಗಿದ್ದು ಆಸ್ಥಾನದ ಅಂದಿನ ಶಿಷ್ಟಾಚಾರದಲ್ಲೂ ಶಿಕ್ಷಣ ಹೊಂದಿದ್ದ. ಜೀವನದುದ್ದಕ್ಕೂ ಆಸ್ಥಾನಿಕ ರಾಯಭಾರಿ ಹಾಗೂ ಸರ್ಕಾರದ ಅಧಿಕಾರಿಯಾಗಿ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಿ ವಿಸ್ತಾರವಾದ ಲೋಕಾನುಭವವನ್ನು ಪಡೆದ. 1359ರಲ್ಲಿ ಫ್ರಾನ್ಸ್‍ನಲ್ಲಿ ಸೈನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿ ರೀಮ್ಸ್ ಬಳಿ ಸೆರೆ ಸಿಕ್ಕಿಬಿದ್ದ. ರಾಜನೇ ಹಣ ಕೊಟ್ಟು ಬಿಡುಗಡೆ ಮಾಡಿಸಿದ. 1366ರಲ್ಲಿ ರಾಣಿಯ ಪರಿಚಾರಿಕೆಯರಲ್ಲಿ ಒಬ್ಬಳಾದ ಫಿಲಿಪ್ಪಳನ್ನು ಮದುವೆಯಾದ. 1367ರಲ್ಲಿ ದೊರೆಯ ಕುಟುಂಬದಲ್ಲಿ ಯೋಮನ್ ಆಫ್ ದಿ ಚೇಂಬರ್ ಆಗಿಯೂ ಮರುವರ್ಷವೇ ಎಸ್‍ಕ್ವಯರ್ ಆಗಿಯೂ ನೇಮಕಗೊಂಡ. ಆ ಕಾರ್ಯದ ನಿಮಿತ್ತ ಈತ ನಿರ್ವಹಿಸಬೇಕಾಗಿದ್ದ ನಾನಾ ಬಗೆಯ ರಾಜಕೀಯ ಮತ್ತು ಸಾಮಾಜಿಕ ಕರ್ತವ್ಯಗಳಲ್ಲಿ ಕಥೆಗಳಿಂದ ಹಾಡುಗಳಿಂದ ರಾಜಾಸ್ಥಾನವನ್ನು ರಂಜಿಸುವುದೂ ಒಂದಾಗಿತ್ತು, 1368, 69, 70ರಲ್ಲಿ ರಾಜಕಾರ್ಯದಮೇಲೆ ವಿದೇಶ ಪ್ರವಾಸ ಕೈಗೊಂಡು ಫ್ರಾನ್ಸ್ ಮತ್ತು ಇಟಲಿ ದೇಶಗಳಿಗೆ ಹೋಗಿಬಂದ. 1372ರಲ್ಲಿ ಜಿನೋವ ಜೊತೆಗೆ ವಾಣಿಜ್ಯ ಒಪ್ಪಂದದ ಮಾತುಕತೆ ನಡೆಸಲು ನಿಯೋಜಕರಾದ ಮೂವರು ಕಮಿಷನರುಗಳ ಪೈಕಿ ಒಬ್ಬನಾಗಿ ಇನ್ನೂ ಹೆಚ್ಚು ಕಾಲದ ಪ್ರವಾಸ  ಮಾಡಿದ. ಹಾಗೆಯೇ ಫ್ಲಾರೆನ್ಸಿಗೂ ಭೇಟಿಯಿತ್ತ. ಈ ಪ್ರವಾಸದಲ್ಲಿ ಡ್ಯಾಂಟೆ ಮತ್ತು ಬೊಕ್ಯಾಚಿಯೊಗಳ ಇಟಾಲಿಯನ್ ಕೃತಿಗಳ ಪರಿಚಯ ಮಾಡಿಕೊಂಡ. 1373ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ ಸುಂಕದ ಖಾತೆಯ ಅಧಿಕಾರಿ ಮತ್ತು ಉಣ್ಣೆಯ ಅಧಿಕಾರಿಯ ಹೊಸ ಹುದ್ದೆ ದೊರಕಿತು. ಮುಂದಿನ ಹನ್ನೆರಡು ವರ್ಷ ಈ ಹುದ್ದೆಯಲ್ಲಿಯೇ ಮುಂದುವರಿದಿದ್ದಲ್ಲದೆ ವಿದೇಶ ರಾಯಭಾರಕ್ಕಾಗಿಯೂ ದೊರೆಯ ಮದುವೆಯ ಸಂಧಾನದ ನಿಮಿತ್ತವಾಗಿಯೂ ಅನೇಕ ಬಾರಿ ಫ್ರಾನ್ಸಿಗೂ ಒಮ್ಮೆ ಇಟಲಿಗೂ ಭೇಟಿಯಿತ್ತ. ಈ ಅವಧಿಯಲ್ಲಿಯೇ ದಿ ಹೌಸ್ ಆಫ್ ಫೇಮ್, ದಿ ಪಾರ್ಲಿಮೆಂಟ್ ಆಫ್ ಫೌಲ್ಸ್, ಟ್ರಾಯಿಲಸ್ ಅಂಡ್ ಕ್ರೆಸೀಡ ಎಂಬ ಸ್ವಂತ ಕೃತಿಗಳನ್ನೂ ಬಾಯ್‍ಥಿಯಸ್‍ನ ದಿ ಕಾನ್‍ಸೊಲೇಷನ್ಸ್ ಆಫ್ ಫಿಲಾಸಫಿಯ ಅನುವಾದವನ್ನೂ ರಚಿಸಿದ. 1386ರಲ್ಲಿ ಕೆಂಟಿನ ಜಸ್ಟಿಸ್ ಆಫ್ ದಿ ಪೀಸ್ ಆಗಿಯೂ ಪಾರ್ಲಿಮೆಂಟ್ ಸಭೆಗೆ ಸದಸ್ಯನಾಗಿ ಹಾಜರಾಗಲು ನೈಟ್ ಆಫ್ ದಿ ಷಯರ್ ಆಗಿಯೂ ನೇಮಕಗೊಂಡ. 1389ರಲ್ಲಿ ಎರಡನೆಯ ರಿಚರ್ಡ್ ದೊರೆ ಪುನಃ ಅಧಿಕಾರಕ್ಕೆ ಬಂದ ಪರಿಣಾಮವಾಗಿ ಚಾಸರಿಗೆ ವೆಸ್ಟ್‍ಮಿನ್‍ಸ್ಟರ್ ಅರಮನೆ, ಟವರ್ ಆಫ್ ಲಂಡನ್ ಮುಂತಾದ ಕಟ್ಟಡಗಳನ್ನು ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವ ಕೆಲಸವೂ ನಾರ್ತ್ ಪೇಥರ್‍ಟನ್‍ಗೆ ಸೇರಿದ ಅರಣ್ಯವನ್ನು ನೋಡಿಕೊಳ್ಳುವ ಕೆಲಸವೂ ದೊರೆತವು. 1400ರಲ್ಲಿ ಚಾಸರ್ ಮರಣ ಹೊಂದಿದಾಗ ಅವನನ್ನು ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಸಮಾಧಿ ಮಾಡಲಾಯಿತು. ಇದು ಇವನಿಗೆ ಸಿಕ್ಕ ಅಪೂರ್ವ ಗೌರವ. ಇವನ ಸಮಾಧಿಯ ಪ್ರದೇಶ ಅನಂತರ ಪೊಯಟ್ಸ್ ಕಾರ್ನರ್ ಎಂದು, ಹೆಸರಾಂತ ಕವಿಗಳ ಸಮಾಧಿ ಪ್ರದೇಶವಾಯಿತು.

ಬಹುಮುಖ ಚಟುವಟಿಕೆ ಮತ್ತು ವಿದೇಶ ಪ್ರವಾಸಗಳಿಂದ ನಾನಾ ಬಗೆಯ ಜನರ ಸಂಪರ್ಕ ಕವಿಗೆ ಲಭ್ಯವಾಯಿತು. ಕವಿಯ ಸ್ವಂತ ಜೀವನದ ಬಗ್ಗೆ ಕೆಲವು ಕವನಗಳಲ್ಲಿ ಹಲವು ಸೂಚನೆಗಳು ದೊರಕುವುವು. ದಿ ಹೌಸ್ ಆಫ್ ಫೇಮ್‍ನಲ್ಲಿ ವಸಂತಕಾಲ ಬಿಟ್ಟು ಉಳಿದ ಕಾಲದಲ್ಲಿ ತಾನು ಪುಸ್ತಕ ಪ್ರೇಮಿಯೆಂದೂ ಲೆಜೆಂಡ್ ಆಫ್ ಗುಡ್ ವಿಮೆನ್, ಕ್ಯಾಂಟರ್‍ಬರಿ ಟೇಲ್ಸ್, ಪ್ರೋಲೋಗ್ ಆಫ್ ಸರ್ ಥೋಪಾಸಿನ ಪೀಠಿಕಾ ಕವನದಲ್ಲಿ ತಾನು ಮೌನ ಸ್ವಭಾವದ, ಸಂಕೋಚದ, ಸೊಂಪಾಗಿ ಬೆಳೆದ ವಿಚಿತ್ರವ್ಯಕ್ತಿಯೆಂದೂ ತನ್ನನ್ನು ಬಣ್ಣಿಸಿಕೊಂಡಿದ್ದಾನೆ.

ಚಾಸರ್ ಬರೆದದ್ದು ಮುಖ್ಯವಾಗಿ ತನ್ನ ನಾಡಿನ ಗಣ್ಯರೂ ಸುಸಂಸ್ಕøತರೂ ಆದ ಕೆಲವೇ ಮಂದಿಯನ್ನು ಕೃಷ್ಟಿಯಲ್ಲಿಟ್ಟುಕೊಂಡು. ಇವನ ಕವನಗಳು ಮೊದಲು ಆಸ್ಥಾನದ ಶ್ರೋತೃಗಳಿಗೆ ವಾಚಿಸಲ್ಪಟ್ಟು ಅನಂತರ ಹಸ್ತಪ್ರತಿ ರೂಪದಲ್ಲಿ ನಗರದ ಹಾಗೂ ಹಳ್ಳಿಯ ಓದುಗರಲ್ಲಿ ಪ್ರಚಾರಗೊಂಡವು. ಇವನು ಯೌವನದಲ್ಲಿ ಅನೇಕ ದಿನಗಳನ್ನು ಫ್ರಾನ್ಸ್‍ನಲ್ಲಿ ಕಳೆದಿದ್ದರಿಂದ ಮಧ್ಯಯುಗದ ಫ್ರೆಂಚ್ ಸಾಹಿತ್ಯದ ಪ್ರಭಾವ ಇವನ ಕೃತಿಗಳಲ್ಲಿ ಕಂಡುಬರುತ್ತದೆ. ಫ್ರೆಂಚ್ ಭಾಷೆಯಿಂದ ಮಾಡಿದ ಅನುವಾದಗಳಲ್ಲಿ ಅಥವಾ ಫ್ರೆಂಚ್ ಮಾದರಿಯನ್ನು ಅನುಸರಿಸಿ ಬರೆದ ಕವನಗಳಲ್ಲಿ ಮುಖ್ಯವಾದುವು ದಿ ರೋಮಾಂಟ್ ಆಫ್ ರೋಸ್, ದಿ ಕಂಪ್ಲೇಂಟ್ಸ್ , ದಿ ಬುಕ್ ಆಫ್ ದಿ ಡಚೆಸ್, ದಿ ಮೈನರ್ ಬ್ಯಾಲಡ್ಸ್-ಮುಂತಾದುವು. ಮುಂದೆ ಚಾಸರ್ ಇಟಾಲಿಯನ್ ಸಾಹಿತ್ಯದಿಂದ, ವಿಶೇಷವಾಗಿ ಡ್ಯಾಂಟೆ ಮತ್ತು ಬೊಕ್ಯಾಚಿಯೊ ಕಥೆಗಳಿಂದ, ಪ್ರಭಾವಗೊಂಡು ಬರೆದ ಕೃತಿಗಳಲ್ಲಿ ಪ್ರಮುಖವಾದುವು-ಟ್ರಾಯಿಲಸ್ ಅಂಡ್ ಕ್ರೆಸೀಡ ಮತ್ತು ದಿ ನೈಟ್ಸ್ ಟೇಲ್. ಚಾಸರನ ಕವಿತಾಶಕ್ತಿ ಪೂರ್ಣವಾಗಿ ವಿಕಾಸಗೊಂಡ ಅವಧಿಯಲ್ಲಿ ಬರೆದ ಕ್ಯಾಂಟ್ ಬರಿ ಟೇಲ್ಸ್ ವಿಶಿಷ್ಟ ಸೊಬಗಿನಿಂದ ಕೂಡಿದೆ. ಇವುಗಳಲ್ಲಿ ನಾವು ಕಾಣುವುದು ಶುದ್ಧಾಂಗವಾಗಿ ಇಂಗ್ಲಿಷ್ ನೆಲದ ಸೊಗಡನ್ನು.
ದಿ ಬುಕ್ ಆಫ್ ದಿ ಡಚೆಸ್ : 1369. 1369ರ ಕೊನೆಯಲ್ಲಿ ಬರೆದ ಕನಸು ರೂಪಕಕವನ (ಡ್ರೀಮ್ ಅಲೆಗೊರಿ). ಚಾಸರನ ಪೋಷಕನಾಗಿದ್ದ ಚಾನ್ ಆಫ್ ಗಾಂಟ್‍ನ ಹೆಂಡತಿ ಬ್ಲಾಂಚಿ ಮೃತಿ ಹೊಂದಿದಾಗ ಬರೆದ ಶೋಕಗೀತೆ. ಈ ಕವನದಲ್ಲಿ ಬ್ಲಾಂಚಿಯ ಸದ್ಗುಣಗಳ ಬಗ್ಗೆ ಪ್ರಶಂಸೆಯೂ ಅವಳ ಸಾವಿನ ಬಗ್ಗೆ ಸಂತಾಪವೂ ಕಲಾತ್ಮಕವಾಗಿ ಸಂಗಮಿಸಿವೆ. ಕವಿ ತನ್ನ ಕನಸಿನಲ್ಲಿ, ಅರಣ್ಯದಲ್ಲಿ ಹೋಗುತ್ತಿರುವಾಗ ಕಪ್ಪುಬಟ್ಟೆಯ ವ್ಯಕ್ತಿಯೊಬ್ಬನನ್ನು ಸಂಧಿಸುತ್ತಾನೆ. ಅವನಿಂದ ತಾನು ಪ್ರೀತಿಸಿದ್ದ ಹೆಣ್ಣನ್ನು ಒಲಿಸಿಕೊಂಡ ಕಥೆಯನ್ನು ಅವಳ ಗುಣಗಾನವನ್ನು ಕೇಳುತ್ತಾನೆ. ಕಡೆಗೆ ಅವಳು ಮೃತಿಹೊಂದಿದಳೆಂದು ಹೇಳಿ ಆ ವ್ಯಕ್ತಿ ತನ್ನ ದುಃಖವನ್ನು ತೋಡಿಕೊಳ್ಳುತ್ತಾನೆ. ಕವಿ ಒಬ್ಬ ಮಂದಬುದ್ಧಿಯ ಶ್ರೋತೃವಾಗಿ ನಟಿಸಿ ಬ್ಲಾಂಚಿಯ ಗುಣಗಾನವನ್ನು ಅವಳ ಗಂಡನ ಬಾಯಿಂದಲೇ ಹೇಳಿಸುವುದು ಇದರ ಸ್ವಾರಸ್ಯ. ಕಥೆಯ ಓಟ ಚುರುಕಾಗಿದೆ. ಕನಸಿನ ಪ್ರಪಂಚದಲ್ಲಿ ಕೊಂಡೊಯ್ಯುವ ಕಥೆಯಾದರೂ ಭಾವನೆಗಳನ್ನು ಬಣ್ಣಿಸುವುದರಲ್ಲಿ ಮನೋವಿಶ್ಲೇಷಣಾತ್ಮಕ ಒಳನೋಟವಿದೆ. ಮುಖ್ಯವಾಗಿ ಪ್ರಯೋಗಕ್ಕಾಗಿ ಬರೆದದ್ದಾದರೂ ಪ್ರಾಸ, ಛಂದಸ್ಸು ಮತ್ತು ಕಾವ್ಯ ಭಾಷೆಯ ದೃಷ್ಟಿಯಿಂದ ಕೃತಿ ಗಮನಾರ್ಹವಾಗಿದೆ.

ದಿ ಹೌಸ್ ಆಫ್ ಫೇಮ್ : 1374-80. 2,158 ಸಾಲುಗಳ ಅಪೂರ್ವ ಕವನ. ಈ ಕೃತಿಯಲ್ಲಿ ಡ್ಯಾಂಟೆಯ ಮತ್ತು ಓವಿಡ್ಡರ ಪ್ರಭಾವ ಸ್ಪಷ್ಟವಾಗಿ ಮೂಡಿದೆ. ಕಥೆ ಕನಸಿನ ಚೌಕಟ್ಟಿನಲ್ಲಿದ್ದರೂ ನಮ್ಮನ್ನು ಕನಸಿನ ಲೋಕದಿಂದ ಹೊರಗೆ ತರುತ್ತದೆ. ಕವನ ಮೂರು ಭಾಗಗಳಲ್ಲಿದೆ. ಮೊದಲ ಭಾಗ ಕನಸುಗಳ ಬಗೆಗಿನ ಚರ್ಚೆಯಿಂದ ಆರಂಭವಾಗುವುದು. ಅಲ್ಲಿಂದಲೇ ನೇರವಾಗಿ ಒಂದು ಕನಸಿನ ವರ್ಣನೆ. ಅದರಲ್ಲಿ ಕವಿ ಗಾಜಿನ ದೇವಾಲಯಕ್ಕೆ ಹೋಗಿ ಅದರೆ ಗೋಡೆಗಳ ಮೇಲೆ ಕೆತ್ತಿರುವ ಈನಿಯಡ್ ಕಥೆಯ ಚಿತ್ರಗಳನ್ನು ನೋಡುತ್ತಾನೆ. ಅವುಗಳಲ್ಲಿ ಡೀಡೋ ಪ್ರಕರಣಕ್ಕೆ ಪ್ರಾಮುಖ್ಯ ಬಂದಿದೆ. ಚಾಸರ್ ಈ ಪ್ರಕರಣವನ್ನು 140 ಸಾಲುಗಳಲ್ಲಿ ವಿವರಿಸುತ್ತಾನೆ. ಈ ಸಂದರ್ಭದಲ್ಲಿ ಪ್ರೇಮದಲ್ಲಿ ದ್ರೋಹ ಬಗೆದವರ ಪಟ್ಟಿ ಬರುತ್ತದೆ. ಈ ಪ್ರೇಮವಂಚಕರಿಗೆ ಸಂಬಂಧಪಟ್ಟ ಘಟನೆಗಳು ಚಿತ್ರಗಳಾಗಿ ನಮ್ಮ ಕಣ್ಣುಮುಂದೆ ನಿಲ್ಲುತ್ತವೆ. ದೇವಸ್ಥಾನದ ಬಾಗಿಲಿನ ಹೊರಗೆ ಬಂದಾಗ ಕವಿಗೆ ಕಾಣಿಸುವುದು ಆಕಾಶದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಒಂದು ಬಂಗಾರದ ಹದ್ದು. ಹದ್ದು ಹಾರಿ ಬಂದು ತನ್ನ ಮೊನೆಯುಗುರುಗಳಲ್ಲಿ ಕವಿಯನ್ನು ಹಿಡಿದುಕೊಂಡು ಮೇಲಕ್ಕೆ ಹಾರುತ್ತದೆ. ಈ ಘಟ್ಟದಿಂದ ಕಥನದಲ್ಲಿ ಒಂದು ಹೊಸ ಲವಲವಿಕೆಯಿಂದ ಕೂಡಿದ ಹಾಸ್ಯ ಹಾಗೂ ಆಡುಮಾತಿನ ಸೊಗಸು ಮೂಡುತ್ತವೆ. ಹದ್ದು ತನ್ನನ್ನು ಕೊಂಡೊಯ್ಯುವಾಗ ಕವಿ ದಿಗಿಲುಪಡುವುದೂ ಆಗ ಅವನನ್ನು ಆ ರಣಹದ್ದು ಸಂತೈಸುವುದೂ ಸಂಭಾಷಣೆಯ ರೂಪದಲ್ಲಿ ಬಂದಿವೆ. ಸಂಭಾಷಣೆಯನ್ನು ಹೊಸ ತಂತ್ರವಾಗಿ ಚತುರವಾಗಿ ಇಲ್ಲಿ ಕವಿ ಬಳಸುತ್ತಾನೆ. ಅಲ್ಲಿನ ಜನರ ವಿಷಯವನ್ನು ಅಜ್ಞನಾದ ಕವಿಗೆ ಹದ್ದು ತಿಳಿಸುತ್ತದೆ. ಹೌಸ್ ಆಫ್ ಫೇಮಿನಲ್ಲಿ ಕವಿ ಪ್ರೇಮದ ವಾರ್ತೆಯನ್ನು ಕೇಳುವನೆಂದೂ ಮಾನವರ ಅಸೂಯೆ, ಭಯ, ಠಕ್ಕುತನದ ಬಗ್ಗೆ ತಿಳುವಳಿಕೆ ಪಡೆಯುವನೆಂದೂ ಹದ್ದು ತಿಳಿಸುತ್ತದೆ. ಕವಿಯನ್ನು ಜಫ್ರಿ ಎಂದು ಸಲಿಗೆಯಿಂದ ಸಂಬೋಧಿಸುತ್ತ ಹದ್ದು ಒಂದು ಉಪನ್ಯಾಸವನ್ನೇ ಕೊಡಲು ಪ್ರಾರಂಭಿಸುತ್ತದೆ. ಎಂಥ ಜಟಿಲ ವಿಷಯಗಳನ್ನೂ ಮೂಢವ್ಯಕ್ತಿಗಳಿಗೂ ತಿಳಿಯುವಂತೆ ಸರಳವಾಗಿ ವಿವರಿಸಬಲ್ಲೆನೆಂದು ಹದ್ದು ಹೆಮ್ಮೆಯಿಂದ ಜಂಬ ಕೊಚ್ಚಿಕೊಳ್ಳುತ್ತದೆ. ಕವಿಯ ಬವಣೆ ಹೇಳತೀರದು. ಅವನ ಬಾಯಿ ಕಟ್ಟಿದಂತಾಗಿ, ಹದ್ದಿನ ಪ್ರಶ್ನೆಗಳಿಗೆ ಒಂದೊಂದೇ ಮಾತಿನಲ್ಲಿ ಉತ್ತರ ಕೊಟ್ಟು ಸುಮ್ಮನಾಗುತ್ತಾನೆ. ಇವನನ್ನು ಹೌಸ್ ಆಫ್ ಫೇಮಿನ ಕಡಿದಾದ ಬಂಡೆಯ ಮೇಲೆ ಇಳಿಸುವವರೆಗೂ ಹದ್ದು ತನ್ನ ನೀತಿಬೋಧಕ ಮಾತಿನ ಹೊಳೆಯನ್ನೇ ಹರಿಸುತ್ತದೆ. ಹೌಸ್ ಆಫ್ ಫೇಮ್ ನಿಂತಿರುವುದು ದಟ್ಟ ಮಂಜುಗೆಡ್ಡೆಯಿಂದ ಕವಿದ ಬಂಡೆಯ ತುದಿಯಲ್ಲಿ. ಅದನ್ನು ಕವಿ ಪ್ರಯಾಸದಿಂದ ಹತ್ತಬೇಕು. ಬಂಡೆಯ ಮೇಲೆ ಒಂದು ಕಡೆ ಅನೇಕ ಕೀರ್ತಿವಂತರ ಹೆಸರುಗಳು ಕೆತ್ತಿವೆ. ಪ್ರತಿಯೊಂದು ಹೆಸರಿನಲ್ಲೂ ಕೆಲವು ಅಕ್ಷರಗಳು ಕರಗಿಹೋಗಿವೆ. ಆದರೆ ಬಂಡೆಯ ಇನ್ನೊಂದು ಭಾಗದಲ್ಲಿರುವ ಪ್ರಾಚೀನ ಕಾಲದ ಕೀರ್ತಿವಂತರ ಹೆಸರುಗಳು ಅಚ್ಚಳಿಯದೆ ನಿಂತಿವೆ. ಮುಂದೆ ಪಚ್ಚೆ ರತ್ನಗಳಲ್ಲಿ ಕಟ್ಟಿದ ಭವ್ಯ ಕೋಟೆಮನೆಯಲ್ಲಿ ಹೋಮರ್, ವರ್ಜಿಲ್, ಓವಿಡ್, ಲೂಕಾನ್, ಸ್ಟಾಟಿಯಸ್, ಫ್ರಿಜಿಯಸ್ ಮುಂತಾದವರ ಶಿಲಾವಿಗ್ರಹಗಳನ್ನು ನೋಡುತ್ತಾನೆ. ಅಲ್ಲಿಯೇ ಅಧಿಕ ಸಂಖ್ಯೆಯಲ್ಲಿ ನೆರೆದಿರುವ ಜನರ ಗುಂಪುಗಳು ಬೇರೆ ಬೇರೆ ರೀತಿಯ ಯಶಸ್ಸಿಗಾಗಿ ಕೀರ್ತಿದೇವತೆಯ ಅನುಗ್ರಹವನ್ನು ಕೋರುತ್ತಿರುತ್ತಾರೆ. ಕೊನೆಯಲ್ಲಿ ಒಬ್ಬ ವ್ಯಕ್ತಿ ಕವಿಯ ಕಡೆ ತಿರುಗಿ, ಅವನ ಹೆಸರೇನೆಂದು ವಿಚಾರಿಸುತ್ತ ಅವನೂ ಯಶಸ್ಸನ್ನು ಬಯಸಿ ಅಲ್ಲಿಗೆ ಬಂದಿರುವನೇ ಎಂದು ಕೇಳುತ್ತಾನೆ. ಆ ಬಗೆಯ ಯಾವ ಆಶೆಯೂ ತನಗೆ ಇಲ್ಲವೆಂದೂ ಅವನು ಬಂದಿರುವುದು ಹೊಸವಾರ್ತೆಯನ್ನು ಕೇಳುವುದಕ್ಕಾಗೆಂದೂ ಕವಿ ಉತ್ತರಿಸುತ್ತಾನೆ. ಆಗ ಆ ವ್ಯಕ್ತಿ ಕವಿಯನ್ನು ಹೌಸ್ ಆಫ್ ಫೇಮಿನಿಂದ ಹೌಸ್ ಆಫ್ ರೂಮರ್‍ಗೆ ಕರೆದುಕೊಂಡು ಹೋಗುತ್ತಾನೆ. ಹೌಸ್ ಆಫ್ ರೂಮರ್ ಕೊಂಬೆಗಳಿಂದ ಕಟ್ಟಿರುವ ಕಟ್ಟಡ. ಈ ಪಂಜರದಂಥ ಕಟ್ಟಡ ಎಲ್ಲ ಬಗೆಯ ವದಂತಿಗಳ ಸದ್ದಿನಿಂದ ತುಂಬಿರುತ್ತದೆ. ಆ ಶಬ್ದ ಹೊರಗೆ ಹೋಗಲು ಕಟ್ಟಡದಲ್ಲಿ ಬೇಕಾದಷ್ಟು ತೂತುಗಳೂ ಇರುತ್ತವೆ. ಒಳಗೆ ಜನ ಹರಟೆ ಹೊಡೆಯುತ್ತ ಒಬ್ಬರಿಂದೊಬ್ಬರಿಗೆ ವದಂತಿ ಹರಡುತ್ತಿರುವ ದೃಶ್ಯವನ್ನು ಕಿಟಕಿಯ ಮೂಲಕ ಕವಿ ನೋಡುತ್ತಾನೆ. ಆ ಹೊತ್ತಿಗೆ ಮಹತ್ತ್ವಪೂರಿತ ವಾರ್ತೆಯನ್ನು ಘೋಷಿಸುವಂತೆ ಕಾಣುವ ಒಬ್ಬ ವ್ಯಕ್ತಿಯನ್ನು ದೂರದಲ್ಲಿ ಕವಿ ನೋಡುತ್ತಿರುವಂತೆಯೇ ಕವಿತೆ ಹಠಾತ್ತನೆ ಕೊನೆಗೊಳ್ಳುತ್ತದೆ. ಇಡೀ ಕೃತಿ ವಿಧವಿಧವಾದ ಅಂಶಗಳು ಮಿಶ್ರಣಗೊಂಡ ವಿಚಿತ್ರ ಕವನವಾಗಿದೆ. ಕನಸು, ಅಂತರಾರ್ಥಗಳನ್ನೊಳಗೊಂಡ ಮಧ್ಯಯುಗದ ಸಾಹಿತ್ಯ ಸಂಪ್ರದಾಯಗಳು ಹಳಸಲಾಗಿದ್ದರೂ ಅದುವರೆವಿಗೂ ಇಂಗ್ಲಿಷಿನಲ್ಲಿಲ್ಲದ ಕೆಲವು ಅಂಶಗಳನ್ನು ಚಾಸರ್ ಮೊದಲ ಬಾರಿಗೆ ಇದರಲ್ಲಿ ಸೇರಿಸಿದ್ದಾನೆ. ಇದರಲ್ಲಿ ಒಂದು ವಿಚಿತ್ರ ತೆರನಾದ ಹಾಸ್ಯ ಇಂಗ್ಲಿಷ್ ಕಾವ್ಯದಲ್ಲಿ ಮೊಟ್ಟಮೊದಲಿಗೆ ಎನ್ನುವಂತೆ ಪ್ರಯೋಗಗೊಂಡಿತು. ಮಧ್ಯಯುಗದ ಕಾವ್ಯ ತೋಟದಲ್ಲಿ ಒಂದು ಹೊಸ ಗಾಳಿ ಬೀಸಿತು-ಎಂಬ ವಿಮರ್ಶಕನ ಅಭಿಪ್ರಾಯವನ್ನು ಇಲ್ಲಿ ನೆನೆಯಬಹುದು. ಅಲ್ಲಲ್ಲಿ ಗಂಭೀರವಾದ ಮಾನಸಿಕ ಸಮಸ್ಯೆಗಳನ್ನು ಕುರಿತು ಚಿಂತನೆಯಿದ್ದರೂ ಮುಖ್ಯವಾಗಿ ಕಥನದ ಧ್ವನಿ ಹಾಸ್ಯದಿಂದ ಕೂಡಿದ ಸಂಭಾಷಣೆಯನ್ನು ಹೆಣೆದಿರುವ ಚತುರತೆ ಈ ಕವನದ ಒಂದು ವೈಶಿಷ್ಟ್ಯ.

ದಿ ಪಾರ್ಲಿಮೆಂಟ್ ಆಫ್ ದಿ ಫೌಲ್ಸ್ : 1382. 699 ಸಾಲುಗಳ ಈ ಕವನವೂ ಕನಸಿನ ರೂಪದಲ್ಲಿದೆ. ಶ್ರೀಮಂತವರ್ಗದ ಸುಸಭ್ಯ ಪ್ರೇಮಸಂಪ್ರದಾಯಗಳನ್ನೂ ಅವನ್ನು ತಿಳಿಯಲಾರದ ಜನಸಾಮಾನ್ಯರ ಅಸಮರ್ಥತೆಯನ್ನೂ ಕುರಿತಂತೆ ಈ ಕವಿತೆ ಒಂದು ವಿಡಂಬನೆ ಎಂದು ಕೆಲವರ ಅಭಿಪ್ರಾಯ. ಕವನ ಸಾಮಗ್ರಿ, ಸಾಂಪ್ರದಾಯಿಕವಾದದ್ದೇ. ಆದರೆ ಇಟಲಿಯ ಡ್ಯಾಂಟೆ ಮತ್ತು ಬೊಕ್ಯಾಚಿಯೊ ಕವಿಗಳ ಪ್ರಭಾವ ಬಹುಮಟ್ಟಿಗೆ ಇಲ್ಲಿದೆ. ಡ್ಯಾಂಟೆಯ ಗಂಭೀರ ವಾಕ್‍ಶಕ್ತಿ ಮತ್ತು ಬೊಕ್ಯಾಚಿಯೋನ ಚಿತ್ರಮಯ ವರ್ಣನೆಯನ್ನು ಓದಿ ಜೀರ್ಣಿಸಿಕೊಂಡಿದ್ದ ಚಾಸರ್‍ನ ಕವಿಚೇತನ ಕವಿತೆಯ ಶೈಲಿ ಮತ್ತು ವಸ್ತುಗಳೆರಡನ್ನೂ ಶ್ರೀಮಂತಗೊಳಿಸಿದೆ. ಕವಿ ಬಳಸಿರುವುದು 7 ಸಾಲುಗಳ ಪದ್ಯ (ರೈಮ್ ರಾಯಲ್). ಕಥೆಯನ್ನು ಸುಲಲಿತವಾಗಿ ಹೇಳುವ ಜಾಣ್ಮೆ ಈ ಕವನದಲ್ಲಿ ಸಿದ್ಧಿಸಿದೆ. ಈ ಶಕ್ತಿ ಇಂಗ್ಲಿಷ್ ಭಾಷೆಯಲ್ಲಿ ಅಭಿವ್ಯಕ್ತಗೊಂಡಿದ್ದೇ ಚಾಸರ್ ಮೂಲಕ.
ಸೋಮ್ನಿಯಂ ಸಿಪಿಯೋನಿಸ್ ಎಂಬ ಪ್ರೇಮ ಜಿಜ್ಞಾಸೆಯ ಗ್ರಂಥವನ್ನು ಕವಿ ಓದಿಮುಗಿಸಿ ಸಂಜೆಗತ್ತಲು ಕವಿಯುತ್ತಿದ್ದಂತೆ ಹಾಗೆಯೇ ನಿದ್ದೆ ಹೋಗುತ್ತಾನೆ. ಆಗ ಅವನು, ತನ್ನ ಕನಸಿನಲ್ಲಿ ಒಂದು ನದಿಯ ಪಕ್ಕದ ತೋಟಕ್ಕೆ ಬರುತ್ತಾನೆ. ಹಕ್ಕಿಗಳೆಲ್ಲ ಅಲ್ಲಿ ಹಾಡುತ್ತಿವೆ. ಕಾಮ, ಸಂತೋಷ, ವಿನಯ, ಆಹ್ಲಾದ, ಸಭ್ಯತೆ, ಸೌಂದರ್ಯ, ಯೌವನ, ಹೊಗಳಿಕೆ ಮೊದಲಾದ ಸಾಂಕೇತಿಕ ಪಾತ್ರಗಳು ಅವನ ಕಣ್ಮುಂದೆ ಹಾದುಹೋಗುತ್ತವೆ. ಕವಿ ವೀನಸ್ಸಿನ ದೇವಾಲಯವನ್ನು ನೋಡುತ್ತಾನೆ. ಹಾಗೆಯೇ ವಿಹರಿಸುತ್ತ ಕಡೆಗೆ ಒಂದು ಹಚ್ಚಸಿರು ಜಾಗಕ್ಕೆ ಬರುತ್ತಾನೆ. ಅಲ್ಲಿ ನಿಸರ್ಗದೇವತೆ ಹೂವಿನ ಬೆಟ್ಟದ ಮೇಲೆ ಕುಳಿತುಕೊಂಡು ಹಕ್ಕಿಗಳ ಮಹಾಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದಾಳೆ. ಅಂದು ಸಂತ ವ್ಯಾಲನ್‍ಟೈನನ ದಿನಾಚರಣೆಯ ಪ್ರಯುಕ್ತ ಹಕ್ಕಿಗಳೆಲ್ಲ ಪ್ರಕೃತಿನಿಯಮಕ್ಕೊಳಗಾಗಿ ತಮ್ಮ ತಮ್ಮ ಕೂಟಸಂಗಾತಿಯರನ್ನು ಆರಿಸಿಕೊಳ್ಳಲು ಸಮಾವೇಶಗೊಂಡಿವೆ. ದೇವತೆಯ ಮಣಿಕಟ್ಟಿನ ಮೇಲೆ ಕುಳಿತಿದ್ದ ಹೆಣ್ಣುಹದ್ದನ್ನು ಮೋಹಿಸಿ ಅದನ್ನು ಮದುವೆಯಾಗಲು ಬಯಸಿ ಮೂರು ಹದ್ದುಗಳು ತಮ್ಮ ಅರ್ಹತೆಯ ಬಗ್ಗೆ ವಾದಮಾಡುತ್ತವೆ. ಅವುಗಳೂ ಸಭ್ಯ ಪ್ರಣಯ ಭಾಷೆಯನ್ನೇ ಅನುಸರಿಸುತ್ತವೆ. ಸಭೆಯಲ್ಲಿದ್ದ ಹಕ್ಕಿಗಳೆಲ್ಲ ಚರ್ಚೆಯಲ್ಲಿ ಭಾಗವಹಿಸುತ್ತವೆ. ಆಸ್ಥಾನೋಚಿತ ಪ್ರೇಮದ ಅತಿ ಶಿಷ್ಟಾಚಾರಗಳ ಬಗ್ಗೆ ಆ ಹಕ್ಕಿಗಳಿಗೆ ಸ್ವಲ್ಪವೂ ಸಹನೆಯಿಲ್ಲ. ಪ್ರೇಯಸಿ ಪ್ರೀತಿಸದಿದ್ದರೆ ಪ್ರೇಮದಲ್ಲಿ ನಿಷ್ಠೆಯ ಮಾತು ತರುವುದು ಹಾಸ್ಯಾಸ್ಪದವೆಂದು ಹೆಬ್ಬಾವಿನ ವಾದಸರಣಿ. ಇದರ ಬಗ್ಗೆ ನಡೆಯುವ ವಾದವಿವಾದ ಕೋಲಾಹಲವನ್ನುಂಟು ಮಾಡಿದಾಗ ಪ್ರಕೃತಿದೇವಿ ಅವರ ಸದ್ದನ್ನಡಗಿಸಿ ತನ್ನ ತೀರ್ಪನ್ನು ಕೊಡುತ್ತಾಳೆ. ಆ ಹೆಣ್ಣುಹದ್ದು ಒಂದು ವರ್ಷ ಕಾಯ್ದು ತನ್ನ ಆಯ್ಕೆಯನ್ನು ಮಾಡಬಹುದೆಂಬುದೇ ದೇವಿಯ ತೀರ್ಮಾನ. ತೀರ್ಮಾನವಾದ ಮೇಲೆ ಪಕ್ಷಿಗಳು ಹಾರಿ ಹೋಗುವ ಮುನ್ನ ಸೇಂಟ್ ವ್ಯಾಲನ್‍ಟೈನನ ಸ್ತೋತ್ರವನ್ನು ಹಾಡುತ್ತವೆ. ಆಗ ಕವಿ ಕನಸಿನಿಂದ ಎಚ್ಚರಗೊಳ್ಳುತ್ತಾನೆ. ಪ್ರೇಮಭಾಷೆಯಲ್ಲ ನುರಿತ ಹದ್ದುಗಳು, ನೀತಿ ಬೋಧಿಸುವ ಹೆಬ್ಬಾವು. ವ್ಯವಹಾರಜ್ಞಾನವುಳ್ಳ ಬಾತುಕೋಳಿ, ರೊಮ್ಯಾಂಟಿಕ್ ಪಾರಿವಾಳ ಹಾಗೂ ಅಪಹಾಸ್ಯ ಮಾಡುವ ಕೋಗಿಲೆ ಚಾಸರನ ಶಕ್ತಿಗೆ ದ್ಯೋತಕವಾಗಿವೆ.

ಟ್ರಾಯಿಲಸ್ ಅಂಡ್ ಕ್ರೆಸೀಡ : 1380. ಚಾಸರನ ಪ್ರತಿಭೆಯನ್ನು ಪೂರ್ಣವಾಗಿ ಪ್ರತಿಬಿಂಬಿಸುವ ಕೃತಿ. ಛಂದಸ್ಸಿನ ತಂತ್ರದಲ್ಲಿ, ಕಥಾನಿರೂಪಣೆಯ ಚಾಣ್ಮೆಯಲ್ಲಿ ಮಾನವ ಸ್ವಭಾವದ ಪರಿಜ್ಞಾನದಲ್ಲಿ ಈ ಕೃತಿ ಶ್ರೇಷ್ಠಮಟ್ಟ ಮುಟ್ಟಿದೆ. ಒಂದು ದೃಷ್ಟಿಯಲ್ಲಿ ಇಂಗ್ಲಿಷಿನಲ್ಲಿ ಮೊದಲ, ನಿಜವಾದ, ಕಾದಂಬರಿಯೆಂದೂ ಪರಿಗಣಿತವಾಗಿದೆ. ಬೊಕ್ಯಾಚಿಯೋವಿನ ಇಲ್‍ಫಿಲೊಸ್ಟ್ರೇಟೊ ಎಂಬ ಕಥೆಯೇ ಇದರ ಮೂಲ. ಅಲ್ಲಿ ಬರುವ ಪ್ರೇಮ ಮತ್ತು ದ್ರೋಹದ ಸರಳ ಕಥೆ ಮತ್ತು ಘಟನೆಗಳಿಗೆ ಒಂದು ಹೊಸ ಆಯಾಮವನ್ನೇ ಚಾಸರ್ ಕೊಡುತ್ತಾನೆ. ಪಾತ್ರ ವಿಶ್ಲೇಷಣವೂ ಹೆಚ್ಚು ಸೂಕ್ಷ್ಮವಾಗಿದೆ. ಟ್ರಾಯ್ ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಈ ದುರಂತ ಪ್ರೇಮದ ಕಥೆ ಇಲ್ಲಿ ಅನೇಕ ಮಾರ್ಪಾಡುಗಳನ್ನು ಹೊಂದಿದೆ. ಬೊಕ್ಯಾಚಿಯೋವಿನ ಕಥೆಯನ್ನು ಆಧಾರವಾಗಿಟ್ಟುಕೊಂಡು ಚಾಸರ್ ತನ್ನ ಲೋಕಾನುಭವ, ಪುಸ್ತಕದಿಂದ ಬಂದ ತಿಳಿವಳಿಕೆ ಹಾಗೂ ಮಾನವ ಸ್ವಭಾವ ಪರಿಜ್ಞಾನವೆಲ್ಲವನ್ನೂ ಇಲ್ಲಿ ತುಂಬುತ್ತಾನೆ. ಮಧ್ಯಯುಗದ ಪ್ರಸಿದ್ಧ ಕವಿಗಳಾದ ಡ್ಯಾಂಟೆ, ಪೆಟ್ರಾರ್ಕ್, ಓವಿಡ್, ಬಯ್‍ಥಿಯಸ್ ಮುಂತಾದವರನ್ನು ಓದಿ ಅವನು ಪಡೆದ ಜ್ಞಾನವೆಲ್ಲವೂ ಇಲ್ಲಿ ಭಟ್ಟಿ ಇಳಿದಿದೆ. ಇದರ ಜೊತೆಗೆ ಅವನ ವಿಶಿಷ್ಟ ಹಾಸ್ಯವೂ ವ್ಯಂಗ್ಯವೂ ಸೇರಿಕೊಂಡು ಈ ಕೃತಿ ಅತ್ಯಂತ ಪರಿಣಾಮಕಾರಿಯಾಗಿದೆ. ನಾವು ಮೊದಲು ನೋಡುವುದು ಪ್ರೇಮದ ವಿಚಾರದ ಬಗ್ಗೆ ಉಪೇಕ್ಷೆಯಿಂದಿದ್ದ ಉಲ್ಲಾಸ ಸ್ವಭಾವದ ತರುಣ ವಿಧವೆ ಕ್ರೆಸೀಡಳನ್ನು. ಒಂದು ಹಬ್ಬದ ದಿನ ದೇವಸ್ಥಾನದಲ್ಲಿ ಕಪ್ಪುವಸ್ತ್ರ ಧರಿಸಿದ್ದ ಕ್ರೆಸೀಡಳನ್ನು ನೋಡಿದೊಡನೆಯೇ ಟ್ರಾಯಿಲಸ್ ಮೋಹಗೊಳ್ಳುತ್ತಾನೆ. ಆ ಪ್ರೇಮಾಕರ್ಷಣೆಯ ಸೆಳೆತದಿಂದ, ಪ್ರೇಮಿಯ ಸರ್ವ ದುಃಖಗಳನ್ನೂ ಯಾತನೆಗಳನ್ನೂ ಅನುಭವಿಸುತ್ತಾನೆ. ಕ್ರೆಸೀಡಳು ಎಲ್ಲ ರೀತಿಯಲ್ಲಿಯೂ ತನಗಿಂತ ಉತ್ತಮಳೆಂದೂ ತನ್ನ ಕೈಗೆ ಎಟುಕದವಳೆಂದೂ ಭಾವಿಸುತ್ತಾನೆ. ಹೀಗೆ ಚಿಂತೆಯಲ್ಲಿ ಮುಳುಗಿ ಹಾಸಿಗೆ ಹಿಡಿದು ಪ್ರಲಾಪಿಸುತ್ತಿದ್ದ ಟ್ರಾಯಿಲಸ್‍ನನ್ನು ಕ್ರೆಸೀಡಳ ಚಿಕ್ಕಪ್ಪನಾದ ಪಾಂಡರೆ ನೋಡಿ ಅವನ ದುಃಖದ ರಹಸ್ಯಯವನ್ನು ತಿಳಿದು ಕ್ರೆಸೀಡಳನ್ನು ಒಲಿಸಿಕೊಳ್ಳುವ ಬಗ್ಗೆ ಅವನಿಗೆ ಭರವಸೆ ಮೂಡುವಂತೆ ಮಾಡುತ್ತಾನೆ.

	ಕ್ರೇಸೀಡಳ ಸ್ಥಿತಿ ಬಿಗಡಾಯಿಸುತ್ತದೆ. ಅವಳ ತಂದೆ ಗ್ರೀಕರ ಕಡೆ ಸೇರಿಕೊಂಡಿರುವ ದೇಶದ್ರೋಹಿ. ಆದ್ದರಿಂದ ಕ್ರೆಸೀಡ ತುಂಬ ಎಚ್ಚರವಹಿಸಬೇಕು. ಪಾಂಡರೆ ಇವರಿಬ್ಬರನ್ನೂ ಕೂಡಿಸುವ ಸನ್ನಾಹದಲ್ಲಿ ತೊಡಗುತ್ತಾನೆ. ಈ ಮಧ್ಯೆ ಟ್ರಾಯಿಲಸ್ ಗ್ರೀಕರ ವಿರುದ್ಧ ತನ್ನ ಸಾಹಸ ಹೋರಾಟದಿಂದ ಶೌರ್ಯವನ್ನು ಪ್ರದರ್ಶಿಸುತ್ತಾನೆ. ಕ್ರೆಸೀಡಳ ಹೃದಯ ಟ್ರಾಯಿಲಸ್‍ನ ಪ್ರೇಮ ಭಿಕ್ಷೆಯನ್ನು ಒಪ್ಪುವಂತೆ ಮಾಡಲು ಪಾಂಡರೆ ಸಕಲ ಪ್ರಯತ್ನಗಳನ್ನೂ ಮಾಡುತ್ತಾನೆ. ಅವಳನ್ನು ಭೇಟಿಮಾಡಿ ಮಾತುಕತೆ ನಡೆಸಿ, ಅವಳ ಕುತೂಹಲವನ್ನು ಕೆರಳಿಸಿ ಟ್ರಾಯಿಲಸ್ ಅವಳಲ್ಲಿ ಅನುರಕ್ತನಾಗಿರುವುದನ್ನು ತಿಳಿಸುತ್ತಾನೆ. ಕ್ರೆಸೀಡ ಮರುಕವಿಟ್ಟು ಮಾತನಾಡಿಸಿದರೆ ಸಾಕು, ಟ್ರಾಯಿಲಸ್ ಆನಂದಭರಿತನಾಗುತ್ತಾನೆ. ಅವನ ಪ್ರೇಮದ ಕಾತರ ಎಷ್ಟೆಂದರೆ ಕ್ರೆಸೀಡ ಅವನನ್ನು ನಿರಾಕರಿಸಿದರೆ ಅವನು ಸಾಯುವುದಂತೂ ಖಂಡಿತ. ಟ್ರಾಯಿಲಸ್ ಒಂದು ವೇಳೆ ಸತ್ತರೆ ತಾನೂ ಸಾಯುವುದು ಖಚಿತ ಎಂದು ಪಾಂಡರೆ ಬಣ್ಣಿಸುತ್ತಾನೆ. ಮೊದಮೊದಲು ಕ್ರೆಸೀಡ ಪ್ರತಿಕೂಲವಾಗಿ ಉತ್ತರಿಸುತ್ತಾಳೆ. ಅವಳಿಗೆ ಒಂದು ಕಡೆ ಲೋಕನಿಂದೆಯ ಹೆದರಿಕೆ. ವಿಧವೆಯಾಗಿ ತಾನೊಬ್ಬಳೇ ಹೇಗೆ ಬೇಕೋ ಹಾಗೆ ಇರುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯ ಮತ್ತೊಂದು ಕಡೆ. ಈ ಪ್ರಣಯ ಯಾಚನೆಗೆ ಅನುಮತಿ ಇತ್ತರೆ ಅದು ಅವಳನ್ನು ಎಲ್ಲೆಲ್ಲಿ ಕರೆದುಕೊಂಡು ಹೋಗುತ್ತದೋ ಎಂಬ ಆತಂಕ. ಆದರೂ ಅವನ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಆ ಹೊತ್ತಿಗೆ ಸರಿಯಾಗಿ ಗ್ರೀಕರೊಡನೆ ಕಾದಾಡಿ ಜಯಪ್ರದವಾಗಿ ಹಿಂದಿರುಗುತ್ತಿದ್ದ ಟ್ರಾಯಿಲಸ್ ಕುದುರೆ ಸವಾರಿ ಮಾಡಿಕೊಂಡು ಕ್ರೆಸೀಡಳ ಕೊಠಡಿಯ ಕಿಟಕಿಯ ಪಕ್ಕದಲ್ಲಿ ಹೋಗುತ್ತಾನೆ.

ಸುಂದರ ಮುಖವನ್ನು, ಧೀರ ನಿಲುವನ್ನು ನೋಡಿ ಕ್ರೆಸೀಡ ತನ್ನ ಹೃದಯದಲ್ಲಿಯೇ ಮೆಚ್ಚಿಕೊಳ್ಳುತ್ತಾಳೆ. ಆದರೂ ಟ್ರಾಯಿಲಸ್‍ನನ್ನು ಭೇಟಿಮಾಡಲು ಏನೋ ಅಳುಕು, ಹಿಂಜರಿತ. ಕಟ್ಟಕಡೆಗೆ ಟ್ರಾಯಿಲಸ್ ಬರೆದ ಪ್ರೇಮಪತ್ರ ಸ್ವೀಕರಿಸಲೂ ಅದಕ್ಕೆ ಉತ್ತರ ಕಳುಹಿಸಲೂ ಒಪ್ಪುತ್ತಾಳೆ. ಪಾಂಡರೆಯ ಹಂಚಿಕೆಯಿಂದಾಗಿ ಟ್ರಾಯಿಲಸ್ ಕ್ರೆಸೀಡಳನ್ನು ಸಂಧಿಸುತ್ತಾನೆ. ಟ್ರಾಯಿಲಸ್ ತನ್ನನ್ನು ಕ್ರೆಸೀಡಾಳಿಗೆ ಒಪ್ಪಿಸುತ್ತಾನೆ. ಅವಳೂ ಅವನ ಪ್ರೇಮವನ್ನು ಸ್ವೀಕರಿಸಲು ಸಿದ್ಧ-ತನ್ನ ಗೌರವಕ್ಕೆ ಚ್ಯುತಿ ಬರದಂತೆ ಟ್ರಾಯಿಲಸ್ ಎಚ್ಚರ ವಹಿಸಿದರೆ ಮಾತ್ರ. ಮಳೆ ಬರುವ ಸೂಚನೆಯಿರುವ ಒಂದು ರಾತ್ರಿ ಪಾಂಡರೆ ಕ್ರೇಸಿಡಳನ್ನು ತನ್ನ ಮನೆಗೆ ಊಟಕ್ಕೆ ಆಹ್ವಾನಿಸುತ್ತಾನೆ. ಭಾರಿ ಮಳೆ ಬಂದು ಆ ರಾತ್ರಿ ಅಲ್ಲಿಯೇ ಅವಳು ತಂಗಬೇಕಾಗುತ್ತದೆ. ಟ್ರಾಯಿಲಸ್ ಕೂಡ ಅಲ್ಲಿಗೇ ಬಂದಿದ್ದಾನೆ-ಅಲ್ಲಿಗೆ ಪೂರ್ವ ಸೂಚನೆಯಿಲ್ಲದೆ ಬಂದಂತೆ ತೋರಿಸಿಕೊಳ್ಳುತ್ತಾನೆ. ಕ್ರೆಸೀಡ ಬೇರೆ ಯಾರನ್ನೋ ಪ್ರೀತಿಸಿದ್ದಾಳೆಂದು ತನ್ನ ಕಳವಳ ವ್ಯಕ್ತಪಡಿಸುತ್ತಾನೆ. ಆಗ ಅಲ್ಲಿಯೇ ಇದ್ದ ಕ್ರೆಸೀಡ ಅವನನ್ನು ಕಟುವಾಗಿ ಮೂದಲಿಸುತ್ತಾಳೆ. ಟ್ರಾಯಿಲಸ್ ತಕ್ಷಣವೇ ಮೂರ್ಛೆ ಹೋಗುತ್ತಾನೆ. ಅವನನ್ನು ಉಪಚರಿಸುವಂತೆ ಕ್ರೆಸೀಡಳಿಗೆ ಹೇಳಿ ಪಾಂಡರೆ ಹೊರಗೆ ಬರುತ್ತಾನೆ. ಅಂದು ರಾತ್ರಿ ಸುಖವಾಗಿ ಕಳೆದು ಮರುದಿನ ಮನಸ್ಸಿಲ್ಲದ ಮನಸ್ಸಿನಿಂದ ಪ್ರಿಯರು ಪರಸ್ಪರ ಅಗಲುತ್ತಾರೆ. ಅವರಿಬ್ಬರ ಗುಪ್ತ ಪ್ರಣಯ ಸ್ವಲ್ಪಕಾಲ ಮುಂದುವರಿಯುತ್ತದೆ. ಆದರೆ ವಿಧಿವಿಲಾಸದಿಂದ ಪ್ರಣಯಿಗಳು ಅಗಲಬೇಕಾಗುತ್ತದೆ.

ಯುದ್ಧಬಂದಿಗಳ ವಿನಿಮಯವಾಗುವ ಸಂದರ್ಭದಲ್ಲಿ ಕ್ರೆಸೀಡಳನ್ನು ಗ್ರೀಕ್ ಪಕ್ಷಕ್ಕೆ ಹೋಗಿರುವ ಅವಳ ತಂದೆಯ ಬಳಿಗೆ ಕಳುಹಿಸಿಕೊಡುವ ತೀರ್ಮಾನವಾಗುತ್ತದೆ. ಪ್ರಣಯಿಗಳು ಅಗಲಬೇಕಾಗಿ ಬಂದದ್ದಕ್ಕಾಗಿ ಪರಿತಪಿಸುತ್ತ, ಕ್ರೂರವಿಧಿಯನ್ನು ದೂಷಿಸುತ್ತ ತಾವು ಸಾಯುವವರೆಗೂ ಒಬ್ಬರನ್ನೊಬ್ಬರು ಪ್ರೀತಿಸುವುದಾಗಿ ಪ್ರಮಾಣ ಮಾಡುತ್ತ ಟ್ರಾಯಿಲಸ್ ಮತ್ತು ಕ್ರೆಸೀಡ ಕಡೆಯ ರಾತ್ರಿಯನ್ನು ಕಳೆಯುತ್ತಾರೆ. ತಾವಿಬ್ಬರೂ ಯಾರಿಗೂ ಕಾಣದಂತೆ ತಪ್ಪಿಸಿಕೊಂಡು ಹೋಗಬಹುದೆಂಬ ಟ್ರಾಯಿಲಸ್ಸನ ಸೂಚನೆಯನ್ನು ಕ್ರೆಸೀಡ ಅವ್ಯಾವಹಾರಿಕವೆಂದು ತಳ್ಳಿ ಹಾಕುತ್ತಾಳೆ. ಅವಳಿಗೆ ಅಪವಾದದ ಭಯ. ಎಲ್ಲಿದ್ದರೂ ತಾನು ಹೊರಟ ಹತ್ತನೆಯ ದಿವಸ ಟ್ರಾಯ್ ನಗರಕ್ಕೆ ಹಿಂದಿರುಗುವುದಾಗಿ ಆಕೆ ಮಾತು ಕೊಟ್ಟಾಗಿದೆ. ಈ ಮಧ್ಯೆ ಅವಳನ್ನು ಗ್ರೀಕ್ ಶಿಬಿರಕ್ಕೆ ಕರೆದೊಯ್ದ ಡಯವಿಡಿ ಎಂಬಾತ ಅವಳನ್ನು ದಾರಿಯಲ್ಲಿಯೇ ಒಲಿಸಿಕೊಳ್ಳುತ್ತಾನೆ. ಅವನು ಪ್ರೇಮ ಚತುರ, ರೂಪವಂತ, ಯಾವುದಕ್ಕೂ ಹೇಸದವ. ಹೆಂಗಸರ ಸ್ವಭಾವವನ್ನು ಚೆನ್ನಾಗಿ ಅರಿತವ. ಕ್ರೆಸೀಡಳ ನಿಸ್ಸಹಾಯಕ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಅಪರಿಚಿತರ ಮಧ್ಯೆ ಇದ್ದ ಕ್ರೆಸೀಡ ಡಯಮಿಡಿಯ ರಕ್ಷಣೆಯನ್ನು ಬಯಸಿ ಅವನನ್ನು ಪ್ರೇಮಿಯಾಗಿ ಸ್ವೀಕರಿಸುತ್ತಾಳೆ. ಪರಿಸ್ಥಿತಿಯ ಒತ್ತಡ ಒಂದು ಕಾರಣವಾದರೆ ಅವಳ ದೌರ್ಬಲ್ಯ ಇನ್ನೊಂದು ಕಾರಣ. ಇಷ್ಟು ಬೇಗ ಅವಳು ಟ್ರಾಯಿಲಸ್ಸಿಗೆ ಕೊಟ್ಟ ಮಾತನ್ನು ಹೇಗೆ ಮರೆತಳು? ಅವಳಲ್ಲಿ ಎಷ್ಟೇ ಸದ್ಗುಣಗಳಿದ್ದರೂ ಗಟ್ಟಿ ಮನಸ್ಸಿರಲಿಲ್ಲ.
ಇತ್ತಕಡೆ ವಿರಹತಾಪದಿಂದ ಬಳಲುತ್ತಿರುವ ಟ್ರಾಯಿಲಸ್ ಕ್ರೆಸೀಡ ಬರುವಳೆಂದು ಕಾದುಕಾದು ನಿರಾಶನಾಗುತ್ತಾನೆ. ಕಡೆಗೆ ಪತ್ರ ಬರೆದುನೋಡುತ್ತಾನೆ. ಅದಕ್ಕೆ ಬಂದ ಕ್ರೇಸೀಡಳ ಉತ್ತರ ಪ್ರೇಮಭಾವದಿಂದ ಕೂಡಿದ್ದರೂ ಉಪಾಯದಿಂದ ಜಾರಿಕೊಳ್ಳುವಂಥದ್ದು. ಟ್ರಾಯಿಲಸ್ ಯುದ್ಧ ಮಾಡುವಾಗ ಡಯಮಿಡಿ ಧರಿಸಿದ್ದ ವಸ್ತ್ರದಲ್ಲಿ ತಾನು ಕ್ರೆಸೀಡಾಗೆ ಕೊಟ್ಟಿದ್ದ ಆಭರಣವನ್ನು (ಪದಕಸೂಚಿ) ನೋಡಿ ಹತಾಶನಾಗುತ್ತಾನೆ. ಕ್ರೆಸೀಡ ತನ್ನನ್ನು ವಂಚಿಸಿದಳೆಂಬ ನಿರಾಶೆಯಿಂದ ಯುದ್ಧದಲ್ಲಿ ಎಲ್ಲ ಆಸೆ ಬಿಟ್ಟು ಅಕಿಲಸನೊಡನೆ ಕಾದಾಡಿ ಮಡಿಯುತ್ತಾನೆ. ಟ್ರಾಯಿಲಸ್‍ನ ಆತ್ಮ ಮೇಲಿನ ಲೋಕದಿಂದ ಈ ಚಿಕ್ಕ ಪ್ರಪಂಚದ ವ್ಯರ್ಥ ವ್ಯವಹಾರಗಳನ್ನು ನೋಡಿ ನಗುತ್ತದೆ.

ದೇವರ ಕಡೆಗೆ ಮನಸ್ಸು ಕೊಡುವ ಕರೆಯೊಡನೆ ಕವಿತೆ ಮುಕ್ತಾಯಗೊಳ್ಳುತ್ತದೆ. ಪ್ರಪಂಚದ ಸುಖದುಃಖಗಳನ್ನು ಕುರಿತು ತಾತ್ತ್ವಿಕ ಚಿಂತನೆಗಳನ್ನೊಳಗೊಂಡ ಇದರ ವ್ಯಾಪ್ತಿ ಮೂಲಕ್ಕಿಂತ ಆಳವಾಗಿದೆ.

ದಿ ಲೆಜೆಂಡ್ ಆಫ್ ಗುಡ್ ವಿಮೆನ್ : 1386-95. ಚಾಸರ್ ತನ್ನ ಕೆಲವು ಬರೆಹಗಳಲ್ಲಿ ಹೆಂಗಸರನ್ನು ಅವಹೇಳನ ಮಾಡಿದ್ದಾನೆಂದು ಕವಿಯನ್ನು ಅವನ ಕನಸಿನಲ್ಲಿ ಪ್ರೇಮದೇವತೆ ಆಕ್ಷೇಪಿಸುತ್ತಾಳೆ. ಆದ್ದರಿಂದ ಪ್ರೇಮದಲ್ಲಿ ನಿಷ್ಠೆಯಿಂದ ನಡೆದುಕೊಂಡ ಹೆಂಗಸರ ಕಥೆಗಳನ್ನು ಬರೆಯುವುದಾಗಿ ಹೇಳುತ್ತಾನೆ. ಇಪ್ಪತ್ತೈದು ಕಥೆಗಳನ್ನು ಬರೆಯಬೇಕೆಂದು ಉದ್ದೇಶಿಸಿದ್ದರೂ ಈಗ ಉಪಲಬ್ಧವಿರುವುವು ಒಂಬತ್ತೇ. ಪ್ರಾಯಶಃ ಕವಿಯೇ ಬೇಸತ್ತು ಅರ್ಥದಲ್ಲಿಯೇ ಕೈಬಿಟ್ಟಿರಬೇಕು. ಪೀಠಿಕೆಯಲ್ಲಿ ಚಾಸರ್ ತನ್ನ ಬಗ್ಗೆ ಕೊಡುವ ವಿವರಗಳೇ ಅದರ ಸ್ವಾರಸ್ಯಭಾಗ.

ಟೇಲ್ಸ ಆಫ್ ಕ್ಯಾಂಟರ್‍ಬರಿ : ಚಾಸರನ ಪ್ರತಿಭೆಯನ್ನು ಪೂರ್ಣವಾಗಿ ಪ್ರಕಟಿಸುವ ಮೇರುಕೃತಿ. ದೇವರು ನೀಡಿರುವ ಸಮೃದ್ಧಿ ಇಲ್ಲಿದೆ ಎಂದು ಡ್ರೈಡನ್ ಹೇಳಿದ ಮಾತುಗಳು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಚಾಸರ್ ಈ ಕಥೆಗಳಲ್ಲಿ 14ನೆಯ ಶತಮಾನದ ಇಂಗ್ಲೆಂಡಿನ ಸಮಾಜಕ್ಕೆ ಕನ್ನಡಿ ಹಿಡಿದಿದ್ದಾನೆ. ಈ ಕೃತಿ ಅಪೂರ್ಣವಾಗಿಯೇ ಉಳಿದಿದೆ. ಲಂಡನ್ನಿನ ಸೌತ್‍ವಾರ್ಕಿನ ಟ್ಯಾಬಾರ್ಡ್ ಪ್ರವಾಸಿಗೃಹದಲ್ಲಿ ಯಾತ್ರಿಕರ ಗುಂಪೊಂದು ಸೇರುತ್ತದೆ. ಕ್ಯಾಂಟರ್‍ಬರಿಯಲ್ಲಿರುವ ಸಂತ ತಾಮಸ್ ಬೆಕೆಟ್ಟಿನ ಸಮಾಧಿಗೆ ತೀರ್ಥಯಾತ್ರೆ ಹೋಗಿ ಬರುವುದೇ ಅವರ ಉದ್ದೇಶ. ಕವಿಯೂ ಪ್ರವಾಸಿಗೃಹದ ಯಜಮಾನನೂ ಸೇರಿ ಮೂವತ್ತು ಜನ ಹೊರಡುತ್ತಾರೆ. ಪ್ರವಾಸದ ಆಯಾಸವನ್ನು ಪರಿಹರಿಸಲು ಪ್ರತಿಯೊಬ್ಬರೂ ಕ್ಯಾಂಟರ್‍ಬರಿಗೆ ಹೋಗುತ್ತ ಎರಡು ಕಥೆಗಳನ್ನೂ ಅಲ್ಲಿಂದ ಹಿಂದಿರುಗುತ್ತ ಎರಡು ಕಥೆಗಳನ್ನೂ ಹೇಳುವಂತೆ ಯಜಮಾನ ಸೂಚಿಸುತ್ತಾನೆ. ಉತ್ತಮ ಕಥೆ ಹೇಳಿದವರಿಗೆ ಹಿಂದಿರುಗಿದ ಮೇಲೆ ಭರ್ಜರಿ ಔತಣವನ್ನು ಇತರರು ಕೊಡಬೇಕೆಂದು ಒಪ್ಪಂದವಾಗುತ್ತದೆ. ಆದರೆ ಇಲ್ಲಿರುವುದು ಇಪ್ಪತ್ತನಾಲ್ಕು ಕಥೆಗಳು ಮಾತ್ರ. ಇಂಗ್ಲಿಷ್ ಸಮಾಜದ ಎಲ್ಲ ಅಂತಸ್ತಿನ ಹಾಗೂ ವೃತ್ತಿಯ ಪ್ರತಿನಿಧಿಯಾದರೂ ಪ್ರತಿಯೊಬ್ಬನಿಗೂ ಒಂದು ವಿಶಿಷ್ಟ ವ್ಯಕ್ತಿತ್ವವಿದೆ. ಪ್ರಥಮ ಪ್ರಸ್ತಾವನಾ ಭಾಗದಲ್ಲಿ ಯಾತ್ರಿಕರೆಲ್ಲರ ವಿವರಣೆಯಿದೆ. ಕಥೆಗಳ ನಡುವೆ ಯಜಮಾನ ಮಾತನಾಡುತ್ತಾನೆ. ಅವರ ಹರಟೆ ಅವರ ವ್ಯಕ್ತಿತ್ವವನ್ನು ಹೊರಗೆಡಹುತ್ತದೆ. ಷೇಕ್ಸ್‍ಪಿಯರ್‍ನಂತೆಯೇ ಚಾಸರ್ ಕೆಲವೇ ಮಾತುಗಳಲ್ಲಿ ಸೊಗಸಾದ ನುಡಿಚಿತ್ರವನ್ನು ಸೃಷ್ಟಿಸಬಲ್ಲ. ಮೊದಲು ಬರುವ ವ್ಯಕ್ತಿ ನೈಟ್. ಮಧ್ಯಯುಗದ ವೀರಸಾಹಸವೇ ಮೂರ್ತಿವೆತ್ತಂತಿದ್ದ ಸಿಪಾಯಿ. ಆಗತಾನೆ ಹೀದನ್ನರೊಡನೆ ಯುದ್ಧಮಾಡಿ ಬಂದಿದ್ದಾನೆ. ಆದರೂ ವಿನಯ ಸೌಜನ್ಯಗಳಿಂದ ಕೂಡಿದ ಸಂಭಾವಿತ. ಅವನ ಮಗ 'ಸ್ಕ್ವಯರ್ ಉಲ್ಲಾಸ ಸ್ವಭಾವದ ಸಾಹಸ ತರುಣ. ಇವನ ಕಥೆಯನ್ನೇ ಮಿಲ್ಟನ್ ಇಲ್ ಪೆನ್ಸೊರೋಸೋ ಕವನದಲ್ಲಿ ನೆನೆಸಿಕೊಂಡು ಅದು ಪೂರ್ಣಗೊಂಡಿದ್ದರೆ ಎಷ್ಟು ಚೆನ್ನವೆಂದು ಹೇಳಿರುವುದು. ಈ ಗುಂಪಿನಲ್ಲಿ ವ್ಯಾಪಾರಿ, ವಕೀಲ, ನಾವಿಕ, ಲಂಡನ್ನಿನ ಕುಶಲಕರ್ಮಿಗಳು, ಹಳ್ಳಿಗಾಡಿನ ಉದ್ಯೋಗಸ್ಥರೂ ಸೇರಿದ್ದಾರೆ. ತರ್ಕದಲ್ಲಿ ಮುಳುಗಿದ ಶ್ರೀಮಂತ ಪಾದ್ರಿಯೂ ಇದ್ದಾನೆ. ಅವನಿಗೆ ಧ್ಯಾನಕ್ಕಿಂತ ಬೇಟೆಯೇ ಹೆಚ್ಚು ಪ್ರಿಯ, ಮತ್ತೊಬ್ಬ ಕ್ರೈಸ್ತ ಸಂನ್ಯಾಸಿ ಫ್ರಯರ್ ಶ್ರೀಮಂತರಿಗೆ ಮಾತ್ರ ಧರ್ಮೋಪದೇಶ ಮಾಡಲು ಇಷ್ಟಪಡುತ್ತಾನೆ-ಅದರಿಂದ ಬರುವ ಪ್ರಯೋಜನ ದೃಷ್ಟಿಯಿಂದ. ಅವನಿಗೆ ಬಡವರ ಗೊಡವೆಯೇ ಬೇಡ. ಚರ್ಚಿನ ನ್ಯಾಯಮಂಡಳಿಗೆ ಪಾಪಕೃತ್ಯ ಮಾಡಿರುವವರನ್ನು ಕರೆದುಕೊಂಡು ಬರುವ ಸಮನರ್ ಮತ್ತು ಕ್ಷಮೆಯನ್ನು ಮಾರಾಟ ಮಾಡುವ ಪಾರ್ಡನರ್ ಇಬ್ಬರೂ ಹಾಡು ಹೇಳುತ್ತ ಜೊತೆಯಲ್ಲೇ ಸವಾರಿ ಮಾಡುವರು. ಇಬ್ಬರೂ ಮೋಸಗಾರರು. ಅವರು ಹೇಳುವ ಕಥೆಗಳು ಅವರ ಸ್ವಭಾವಕ್ಕೆ ತಕ್ಕಂತೆಯೇ ಇವೆ. ಅವರಿಗೆ ವಿದೃಶವಾಗಿ ಧರ್ಮಾತ್ಮನೂ ಬಡವನೂ ಆದ ಪಾರ್ಸನ್ ಇದ್ದಾನೆ. ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಅವನು ಜನಸೇವೆಯನ್ನು ಮಾಡುತ್ತಾನೆ. ಸುಸಂಸ್ಕøತಳೂ ಕೋಮಲಹೃದಯಳೂ ಆದ ಪ್ರಯರೆಸ್ ಮತ್ತು ಇನ್ನೊಬ್ಬ ಕ್ರೈಸ್ತ ಸಂನ್ಯಾಸಿನಿ ಇಬ್ಬರೂ ಹುತಾತ್ಮರ ಕಥೆಗಳನ್ನು ಹೇಳುತ್ತಾರೆ. ಒಬ್ಬ ಅಡಿಗೆಯವನೂ ಪ್ರಾಮಾಣಿಕ ಬೇಸಾಯಗಾರನೂ ಈ ಗುಂಪಿನಲ್ಲಿ ಸೇರಿದ್ದಾರೆ. ದಿ ವೈಫ್ ಆಫ್ ಬಾತ್ ಎಂಬ ಹರಟೆಮಲ್ಲಿಯ ಚಿತ್ರ ಅತ್ಯಂತ ಹಾಸ್ಯಮಯವಾಗಿದೆ. ಅವಳು ತನ್ನ ಐದು ಗಂಡಂದಿರ ಕಥೆಯನ್ನು ಹೇಳುತ್ತ ಕನ್ಯತ್ವದ ಪವಿತ್ರ ಆದರ್ಶವನ್ನೂ ಅಲ್ಲಗಳೆದು ತನ್ನ ಭೋಗ ಸಿದ್ಧಾಂತವನ್ನು ಪ್ರತಿಪಾದಿಸುವುದು ಅಚ್ಚರಿಗೊಳಿಸುವಂತಿದೆ. ದಾಂಪತ್ಯದ ಸುಖವಿರುವುದು ಹೆಂಡತಿಯ ಯಜಮಾನಿಕೆಗೆ ಗಂಡ ತಲೆ ಬಾಗಿಸಿದಾಗ-ಎಂಬ ಅವಳ ವಾದವೂ ಸ್ವಾರಸ್ಯವಾಗಿದೆ. ಹೀಗೆಯೇ ಕೋರ್ಟಿನ ಒಬ್ಬ ಅಮೀನ,  ಶ್ರೀಮಂತ ಮನೆಯ ಪಾರುಪತ್ಯಗಾರ ಮುಂತಾದವರು ಒಟ್ಟಾಗಿ ಅಂದಿನ ಇಂಗ್ಲೆಂಡಿನ ಇಡೀ ಸಮಾಜವನ್ನೇ ಪ್ರತಿಬಿಂಬಿಸುತ್ತಾರೆ. ಈ ಕಥೆಗಳಲ್ಲಿ ಚಾಸರ್ ತನ್ನ ಸಮಾಜದ ಬಗ್ಗೆ ವಿಡಂಬನ ಮಾಡುವುದೂ ತನ್ನ ಹಾಸ್ಯದ ಚಟಾಕಿಯಿಂದ ಮಾನವನ ದೌರ್ಬಲ್ಯಗಳನ್ನು ತೋರಿಸುವುದೂ ಅಸದೃಶವಾಗಿದೆ. ಸೊಗಸಾದ ನುಡಿಚಿತ್ರಗಳಿಂದ ಶೋಭಿಸುವ ಈ ಚಿತ್ರಶಾಲೆಯನ್ನು ನಿರ್ಮಿಸುವುದರಲ್ಲಿ ಚಾಸರ್ ತನ್ನ ಪರಿಪಕ್ವ ಲೋಕಾನುಭವವನ್ನೂ ಕಾವ್ಯ ಪ್ರತಿಭೆಯನ್ನೂ ಮೆರೆದಿದ್ದಾನೆ. ಚಾಸರ್ ಈ ಕಥೆಗಳಲ್ಲಿ ಬೇರೆ ಬೇರೆ ಸಾಹಿತ್ಯ ರೂಪಗಳಾದ ನೈಟ್ ಹೇಳುವ ಮಧ್ಯಯುಗದ ಸಾಹಸದ ಕಥೆ, ಸರ್ ಥೋಪಾಸಿನ ಅಣಕು ರೂಪದ ಪ್ರಾಣಿಕಥೆ, ಮಿಲ್ಲರ್, ರೀವ್ ಮತ್ತು ನಾವಿಕರು ಹೇಳುವ ವರ್ಜಿನ್ ಮೇರಿಯ ಪವಾಡ ಕಥೆ, ಕ್ಲಾರ್ಕ್ ಹೇಳುವ ಜನಪದ ಕಥೆ, ಪಾರ್ಸನ್ನನ ಉಪದೇಶ ಕಥೆ, ಪಾರ್ಡನರ್ ಹೇಳುವ ದೃಷ್ಟಾಂತ ಕಥೆ-ಈ ಮುಂತಾದುವನ್ನು ಬಳಸಿರುವುದು ಮತ್ತೊಂದು ವೈಶಿಷ್ಟ್ಯ.

ಚಾಸರ್ ತನ್ನ ರಸಮಯ ಕವಿತೆಗಳಿಂದ ಇಂಗ್ಲಿಷ್ ಭಾಷೆಗೆ ಒಂದು ಹೊಸ ಸೊಗಸನ್ನೂ ಭಾಷೆ ಛಂದಸ್ಸು ಪ್ರಾಸಗಳಲ್ಲಿ ಪ್ರಯೋಗಗಳನ್ನು ಮಾಡಿ ತನ್ನ ತಾಯ್ನುಡಿಗೆ ಒಂದು ಹೊಸ ಸ್ವರೂಪವನ್ನೂ ಕೊಟ್ಟು ಇಂಗ್ಲಿಷಿನ ಕಾವ್ಯಪ್ರವರ್ತಕನೆಂಬ ಶಾಶ್ವತ ಕೀರ್ತಿಗೆ ಪಾತ್ರನಾಗಿದ್ದಾನೆ.	     (ಎಚ್.ಜಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ